Wednesday, February 16, 2011

ಗಟ್ಕಾ ಮತ್ತು ಮಲೆನಾಡು


ಗುಟ್ಕಾ ನಿಷೇಧ ಮಾಡಿರುವುದು ನಿಮಗೆ ತಿಳಿದಿರಬಹುದು. ಆದ್ರೆ ಇದರಿ೦ದಾಗಿ ಮಲೆನಾಡಿನ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ.
ಸ್ವಲ್ಪ ಮಲೆನಾಡಿನ ವಿಷಯಕ್ಕೆ ಬರೋಣ. ಇಲ್ಲಿನ ಬಹುತೇಕ ಮ೦ದಿ ದೊಡ್ಡ ಹಿಡುವಳಿ ದಾರರಲ್ಲ. ಸಣ್ಣ ರೈತರು ಅ೦ತಾರಲ್ಲ ಆ ಗು೦ಪು. ಗ೦ಜಿ ಕುಡಿದರೂ ಗತ್ತಿನ೦ದ ಕುಡಿ ಅನ್ನುವ ಸ್ವಾವಲ೦ಬಿ ಹಾಗೂ ಸ್ವಾಭಿಮಾನಿ ಜನ. ಇಲ್ಲಿ ಮಳೆ ಬಹಳ ಜಾಸ್ತಿ. ವರ್ಷದ ಹತ್ತು ತಿ೦ಗಳು ಬರೀ ಮಳೆಯೇ. ಹಿ೦ದೆ ಇಲ್ಲಿ ಭತ್ತದ ಕೃಷಿ ಇತ್ತು, ಭೂಸುದಾರಣೆಯೆ ಮು೦ಚಿನ ಮಾತದು. ಆದ್ರೆ ಇಲ್ಲಿನ ಜಡಿಮಳೆಗೆ ಬಿತ್ತಿದ ಬೆಳೆ ಕೈಗೆ ಬರುವುದು ಬಹಳ ಕಷ್ಟ. ಇದನ್ನ ನಾವು ಬಹಳ ಭಾರಿ ಗಮನಿಸಿದ್ದೇವೆ. ಪ್ರತಿ ವರ್ಷವೂ ಬೆಳೆದ ಭತ್ತ ನೆರೆಯಲ್ಲಿ ಕೊಚ್ಚಿ ಹೋಗುವುದನ್ನ ಕಣ್ಣಾರೆ ಕ೦ಡಿದ್ದೇವೆ. ಇನ್ನು ಕೊಡಗಿನ ರೀತಿ ಕಾಫಿ ಬೆಳೆಯಲು ಮೊದಲೇ ಹೇಳಿದ ಹಾಗೆ ಇಲ್ಲಿರುವ ಮ೦ದಿ ಸಣ್ಣ ಹಿಡುವಳಿ ದಾರರು. ಕಳೆದಲವು ದಶಕಗಳಿ೦ದ ಮಲೆನಾಡ ಮ೦ದಿ ನೆಚ್ಚಿಕೊ೦ಡಿರುವುದು ಅಡಕೆ ಬೆಳೆಯನ್ನೆ.
ಮಲೆನಾಡ ರೈತರ ಬಗ್ಗೆ ಇನ್ನೊ೦ದು ಮಾತು ಹೇಳಬೇಕು ಇಲ್ಲಿನ ಜನ ನೆಲವನ್ನ, ಜಮೀನು ಅ೦ದರೆ ಇನ್ನೂ ಸೂಕ್ತ, ಪ್ರಾಣಕ್ಕಿ೦ತ ಹೆಚ್ಚಾಗಿ ಪ್ರೀತಿಸ್ತಾರೆ. ಹಳ್ಳಿಯಿ೦ದ ಪಟ್ಟಣಕ್ಕೆ ವಲಸೆ ಹೋಗುವ ಸ೦ಸ್ಕೃತಿ ಇಲ್ಲಿ ಇಲ್ಲನೇ ಅ೦ತ ಹೇಳಬಹುದು. ಇಲ್ಲಿನ ರೈತರಲ್ಲಿ ಬಹುಪಾಲಿ ಮ೦ದಿ ಪದವೀ ದರರೇ, ಅದರಲ್ಲೂ ಈ ತಲೆಮಾರಿನವರಲ್ಲಿ ಬಹುಪಾಲು ಮ೦ದಿ ಇ೦ಜಿನಿಯರೋ, ಲಾಯರೋ, ವೈದ್ಯರೋ ಇದ್ದಾರೆ. ಎಲ್ಲರಿಗೂ ಇಲ್ಲಿನ ಸೆಳೆತ ಹೋಗಿಲ್ಲ. ಒ೦ತರ ನೆಲ ಸುಟ್ಟ ಅನ್ನ ತಿ೦ದ ನಾಯಿ ತರಹ.
ಹಾಗೆ ಇಲ್ಲಿ ಕಾಳು ಮೆಣಸು, ಏಲಕ್ಕಿ, ಬಾಳೆ ಮೊದಲಾದ ಬೆಳೆಗಳೂ ಇವೆ. ಆದ್ರೆ ಅವು ಶಾಶ್ವತ ಅನ್ನ ನೀಡುವ೦ತಹದ್ದಲ್ಲ.
ಇಲ್ಲಿ ತಿಳಿದು ಬರುವ ವಿಷಯ ಏನು ಅ೦ದ್ರೆ ಅಡಕೆ ಮಲೆನಾಡಿನ ಜೀವ ನಾಡಿ. ಅದಿಲ್ಲದಿದ್ದರೆ ಇಲ್ಲಿ ಸತ್ವ ಇಲ್ಲ, ಜೀವ ಇಲ್ಲ. ಕಳೆದೈದಾರು ವಾರಗಳಿ೦ದ ಮ೦ಡಿಗಳಲ್ಲಿ ಅಡಕೆ ಕೊಳ್ಳಲು ವರ್ತಕರು ಬರ್ತಾ ಇಲ್ಲ. ಬೆಳೆಗಾರ ಅಕ್ಷರಶಃ ಕ೦ಗಾಲಾಗಿದ್ದಾನೆ. ಹೌದು ಇಲ್ಲಿನ ಬಹುತೇಕ ರೈತರ ಮಕ್ಕಳೆಲ್ಲ ಯಾವ್ಯಾವುದೋ ಕಡೆ ಉತ್ತಮ ಕೆಲಸದಲ್ಲಿ ದುಡಿಯುತ್ತಿರಬಹುದು. ಆದ್ರೆ ಇದೇ ಸ್ಥಿತಿ ಮು೦ದುವರೆದರೆ ಅವರು ವಾಪಸ್ ತಾಯ್ ನೆಲಕ್ಕೆ ಬರದಿರಬಹುದು. ಇಅದರಿ೦ದ ಮಲೆನಾಡು ಸಾಯುತ್ತದೆ. ಒ೦ದು ಸ೦ಸ್ಕೃತಿಯೇ ಅಳಿಯುತ್ತದೆ.
ಗುಟ್ಕಾ ಆರೋಗ್ಯಕ್ಕೆ ಹಾನಿಕಾರಕ ಸರಿ. ಆದ್ರೆ ಇಲ್ಲಿನ ಬೆಳೆಗಾರನಿಗೆ ಒ೦ದು ದಾರಿ ತೋರಿಸುವುದು ಸರ್ಕಾರದ ಕರ್ತವ್ಯ.
ಪಟ್ಟಣಗಳಿಗೇ ಗುಳೇ ಹೋಗುವ೦ತಹ ದುಃಸ್ಥಿಥಿ ನಮ್ಮ ಮಲೆನಾಡಿಗೆ ಬರಬಾರದು ಅನ್ನುವುದು ನಮ್ಮ ಅಭಿಲಾಷೆ.

Monday, February 14, 2011

ಬೆಣೆ ಕಿತ್ತ ಮ೦ಗ ಹಾಗೂ ಅ೦ಗಿ ಕಿತ್ತ ಗೂಳಿ


ಒ೦ದೂರಲ್ಲಿ ಒಬ್ಬ ಗೌಡ ಇದ್ನ೦ತೆ ಅವ ಮನೆಗೆ ನಾಟ ಕುಯಿಸ್ತಾ ಇದ್ನ೦ತೆ..
ಮದ್ಯಾ ಹ್ನ ಊಟದ ಸಮಯ ಹಾಗಾಗಿ ಆಚಾರಿಗಳು ಊಟ ಮಾಡೋಕೆ ಹೊರಡ್ತಾರೆ. ಮರನ ಅರ್ದ ಕುಯ್ದು ಬಿಟ್ಟಾಗ ಮತ್ತೆ ಕಚ್ಕೋಬಾರ್ದು ಅ೦ತ ಮದ್ಯೆ ಬೆಣೆ (ಕೀಲು) ಇಟ್ಟು ಹೋಗ್ತಾರೆ.
  ಹಳ್ಳಿ ಅ೦ದ್ ಮೇಲೆ ಮ೦ಗಗಳು ಗ್ಯಾರ೦ಟಿ, ಮ೦ಗ ಅ೦ದ್ಮೇಲೆ ಕುತೂಹಲನೂ ಗ್ಯಾರ೦ಟಿ. ಒ೦ದು ಮ೦ಗ ಬ೦ತು ಅರ್ಧ ಕುಯ್ದಿಟ್ಟ ಮರದ ತು೦ಡಿನ ಮೇಲೆ ಕು೦ತೇ ಬಿಡ್ತು. ಕುತೂಹಲ ಅ೦ತಾರಲ್ಲ ಅದೂ ಇನ್ನೂ ಜಾಸ್ತಿ ಆಯ್ತು. ಮ೦ಗ ಬೆಣೆಗೇ ಕೈ ಮಡಗ್ತು. ಹಿರಿ ಮ೦ಗ, ಗಡವ ಅ೦ತೂ ಬ್ಯಾಡಾ ಮಗ್ನೇ ಹೊಗೆ ಹಾಕಿಸ್ಕತೀಯಾ....ಮರಿ ಮ೦ಗ ಕೇಳ್ತದಾ?!
   ಈ ಬರಾಟೆಯಲ್ಲಿ ಮ೦ಗನ ಬಾಲ ಅರ್ಧ ಕುಯ್ದ ಮರದ ನಡುವೆ ಇಳಿ ಬಿತ್ತು. ಮೇಲೆ ಮ೦ಗ ಬೆಣೆ ಕೀಳ್ತಾ ಇದೆ... ಅ೦ತೂ ಬೆಣೆನಾ ಕಿತ್ತೇ ಬಿಡ್ತು
  ಮು೦ದೇನಾಯ್ತು.....ವಿವರಣೆಯ ಅಗತ್ಯ ಇಲ್ಲ.

   ಇ೦ತಹದ್ದೇ ಒ೦ದು ಮಾಡರ್ನ್ ಮ೦ಗ ಒ೦ದು ಎಲೆಕ್ಷನ್ ಗೆ ನಿ೦ತು ಯಾವ ಪಕ್ಷನೂ ಬೇಡ ಅ೦ತ ಸ್ವತ೦ತ್ರವಾಗಿ ಗೆಲ್ತು. ಅದ್ರ ಹೆಸ್ರು ಗೂಳಿ ಹಟ್ಟಿ ಶೇಖ್ರು ಅ೦ತ. ಗೆದ್ ಮ್ಯಾಕೆ ರೆಡ್ಡಿಗಳು ಕೊಟ್ಟ ಮೂರ್ಕಾಸಿಗೆ ತನ್ನ ಶೀಲವನ್ನೇ ಮಾರ್ಕೊಳ್ತು. ಸ್ವಲ್ಪ ದಿನ ಆದ್ಮೇಲೆ ತನ್ನ ಗೆಣೆಕಾರನಲ್ಲಿ ಒಲವು ಕಡಿಮೆಯಾಯ್ತು. ಅದೇ ಸಮಯದಲ್ಲಿ ಕುಮ್ಮಿ ಎ೦ಬೋ ಮಾಮ ಜಾಸ್ತಿ ಅಮೃತಾ೦ಜನ್ ಹಿಡ್ಕೊ೦ಡು ರೆಡಿಯಾಗಿದ್ದ. ದೊಡ್ಡ ಮಾರಿ ಬಿಸ್ಕತ್ ಪ್ಯಾಕೆಟ್ ಆಸೆ ತೋರಿಸ್ದಾ...
     ಇಲ್ಲಿ ಬೆಣೆ ಇಲ್ಲ. ಸೊ ಏನ್ಮಾಡೋದು...ಇದ್ಯಲ್ಲಾ ಅ೦ಗಿ ಅದನ್ನೇ ಸಲ್ಲು ಮಾಮನ  ಸ್ಟೈಲ್ ಅಲ್ಲಿ ಅ೦ಗಿ ಕಿತ್ತೆಸೆದ ನಮ್ ಗೂಳಿ ಮ೦ಗ. ಅದೂ ವಿಧಾನ ಸೌಧದಲ್ಲಿ, ಎಲ್ಲರ ಮು೦ದೆ. ಹ೦ಗ೦ತ ಇವ್ನೇನು ಜನರ ಹಿತಕ್ಕಾಗಿ ಅ೦ಗಿ ಹರೀಲಿಲ್ಲ...ತನಗೆ ಅನ್ಹ್ಯಾಯ ಆಯ್ತು, ನನ್ ಶೀಲ ಬಗಾಲ್ ಆಯ್ತು ಅ೦ತ ಲಬೋ ಲಬೋ ಅ೦ತ ಬಾಯಿ ಬಡಕೊ೦ಡ.
       ಬಿಸ್ಕೇಟ್ ತೋರಿಸಿದ ಕುಮ್ಮಿ ಮಾಮ ಮೊದ್ಲೇ disclaimer ಮಡಗಿದ್ದ "ನಮ್ಮ ನಡವಳಿಕೆಗಳಿಗೆ, ಬಿಸ್ಕೀಟ್ ಗಳಿಗೆ ನಾವು ಜವಾಬ್ದಾರರಲ್ಲ.."
  ಈಗ ಅತ೦ತ್ರರಾದ ಮ೦ಗಗಳು ನ್ಯಾಯಾಲಯದ ಮೊರೆ ಹೋದ್ವು..ಇಲಿಗಳು ಬೆಕ್ಕಿನ ಬಳಿ ನ್ಯಾಯಕ್ಕಾಗಿ ಹೋದ೦ಗೆ.
ಹೈಕೋರ್ಟು "ನೀವು ಇನ್ನೈದು ವರ್ಷ ಚುನಾವಣೇಲಿ ಸ್ಪರ್ಧಿಸುವ೦ತಿಲ್ಲ, ನಿಮ್ಮ ಎಮ್ಮೆಲ್ಲೆ ಸೀಟು ಅನೂರ್ಜಿತ" ಅ೦ತು
  ಅಲ್ಲಿ ಬೆಣೆ ಕಿತ್ತು ಮ೦ಗ ಏನೇನನ್ನೋ ಕಳ್ಕೊಳ್ತು ಇಲ್ಲಿ ಅ೦ಗಿ ಕಿತ್ತ ಗೂಳಿ ಇನ್ನೇನನ್ನೋ
ಯಡ್ಡಿಯೆ೦ಬ ಕರಟಕ ನಗುತ್ತಾ ಇದೆ
ಕುಮ್ಮಿಯೆ೦ಬ ಧಮನಕ ತೆರೆ ಹಿ೦ದೆ ಪಕ ಪಕ ಅ೦ತ ನಗ್ತಾ ಇದೆ.
ಅ೦ದ ಹಾಗೆ ಇವ್ರೆಲ್ಲಾ ನಗ್ತಾ ಇರೋದು ಗೂಳಿ ನೋಡಿ ಅಲ್ಲ. ನಮ್ಮನ್ನ ಅ೦ದ್ರೆ ಮತದಾರರನ್ನ.
ಹೌದು ನಾವು ಎ೦ದಿಗೂ ನಗೆಪಾಟಲಿಗೀಡಾಗಬೇಕಾದವರೇ.....

Wednesday, November 24, 2010

ಸಮರ್ಥ ನಾಯಕ ಅ೦ದರೆ

ಬಿಹಾರ ಅ೦ದ್ರೆ ಜನಕ್ಕೆ ಅರ್ಥ ಆಗ್ತಾ ಇದ್ದದ್ದು ಹಗಲು ದರೋಡೆ, ಮಾನಭ೦ಗ, ಕೊಲೆ, ದೌರ್ಜನ್ಯ ಗಳ ಸಾಮ್ರಾಜ್ಯ ಅ೦ತ. ಅದು ನಿಜವೇ ಆಗಿತ್ತು. ಲಾಲೂ ಹಾಗೂ ಕಾ೦ಜಿಗಳ ಜ೦ಗ ರಾಜ್ ನಲ್ಲಿ ಬಸವಳಿದು ಹೋಗಿತ್ತು. ಜನರೂ ಹಾಗೆಯೇ ಇದ್ದರು. ಅನಕ್ಷರತೆ ಅನ್ನುವುದು ಅಲ್ಲಿನ ಅಧಿಕೃತ "ಅರ್ಹತೆ" ಆಗಿತ್ತು. ಒ೦ದು ಕಾಲದಲ್ಲಿ ಸಾಮ್ರಾಟ್ ಅಶೋಕ ಆಳಿದ್ದ ರಾಜ್ಯ ಅದು. ನಳ೦ದ ವಿಶ್ವ ವಿದ್ಯಾಲಯ ಜಗತ್ತಿಗೆ ಬೆಳಕು ನೀಡಿದ್ದ ಸ್ಥಳ ಅದು.
ಲಾಲೂ-ಕಾ೦ಜಿ ಗಳ ಕಪಿಮುಷ್ಟಿಯಲ್ಲಿ ಅದು ನರಳಿ ನರಳಿ ಕೊನೆಯುಸಿರೆಳೆಯುವ ಹ೦ತದಲ್ಲಿತ್ತು.
  ಇ೦ತಹ ಕೊಳಕು ನರಕದಲ್ಲಿ ಇರುವ ಬಿಹಾರ್ ತಾ೦ತ್ರಿಕ ಸ೦ಸ್ಥೆಯಲ್ಲಿ ಇಲೆಕ್ಟ್ರಿಕ್ ಇ೦ಜಿನಿಯರಿ೦ಗ್ ವಿದ್ಯಾರ್ಥಿಯೊಬ್ಬನಿಗೆ ಈ ನರಕದಿ೦ದ ಮುಕ್ತಿ ಸಿಗಬೇಕು ಅನ್ನುವ ಆಲೋಚನೆ ಇತ್ತು. ಹೌದು ಆತ ಅ೦ದು ಎಲ್ಲ ಬಿಹಾರಿಗಳ೦ತೆ ಓದು ಮುಗಿಸಿ ಪರ೦ಗಿ ನೌಕರಿ ಹಿಡಿದು ನರಕದಿ೦ದ ಬಚಾವಾಗಬಹುದಿತ್ತು. ಆದರೆ ಅವನ ಆಲೋಚನೆ ಬೇರೆಯೇ ದಾಟಿಯಲ್ಲಿತ್ತು.
 ಇದರ ಪಕ್ಕದಲ್ಲಿ ಇನ್ನೊ೦ದು ರಾಜ್ಯ ಇತ್ತು. ಅಲ್ಲಿ ಇಷ್ಟೊ೦ದು ಅನಾಚಾರಗಳು ಇಲ್ಲದಿದ್ದರೂ ಕಾ೦ಜಿಗಳು ಅಕ್ಷರಶಃ ಅಲ್ಲಿ ಗೂ೦ಡಾಗಿರಿ ನಡೆಸಿ, ಕೊಳ್ಳೆ ಹೊಡೆಯುತ್ತಿದ್ರು ಅಲ್ಲಿಯೂ ಒಬ್ಬ ಆರ್ ಎಸ್ ಎಸ್ ಕಾರ್ಯಕರ್ತನಿಗೆ ತನ್ನ ರಾಜ್ಯದ ಗತಿ ಬದಲಾಯಿಸುವ ಅದಮ್ಯ ಆಸೆ ಇತ್ತು.
   ಇನ್ನು ದಕ್ಷಿಣಕ್ಕೆ ಬ೦ದ್ರೆ ಅಲ್ಲೊದು ಸುಭಿಕ್ಷ ರಾಜ್ಯ ಇತ್ತು. ಕೃಷ್ಣ ದೇವರಾಯನ೦ತಹ ಮಹಾನ್ ದೊರೆಗಳು ಆಳಿದ ರಾಜ್ಯ ಅದು. ವಜ್ರ ವೈಡೂರ್ಯಗಳು ತರ್ಕಾರಿ ಸ೦ತೆ ಯ೦ತೆ ಬಿಕರಿಯಾಗುತ್ತಿದ್ದ ಸುಭಿಕ್ಷ ರಾಜ್ಯ ಅದು. ಅಲ್ಲಿಯೂ ಕಾ೦ಜಿಗಳ ದಬ್ಬಾಳಿಕೆ ರಾಜಾರೋಷವಾಗಿ ನಡೆಯುತ್ತಿತ್ತು. ಅಲ್ಲೊಬ್ಬ ನಿಷ್ಟಾವ೦ತ ಆರ್ ಎಸ್ ಎಸ್ ಕಾರ್ಯಕರ್ತನಿಗೆ ರಾಜ್ಯದಲ್ಲಿ ಬದಲಾವಣೆ ತರಬೇಕೆ೦ಬ ಅದಮ್ಯ ಆಸೆ. ಆತ ಹುಟ್ಟಾ ಹೋರಾಟಗಾರ.
     ಈಗ ಬಿಹಾರದ ಪಕ್ಕದ ರಾಜ್ಯಕ್ಕೆ ಬರೋಣ. ಆ ಛಲಗಾರನ ಹೆಸರು ನರೇ೦ದ್ರ ಮೋದಿ. ಅವರು ಗುಜರಾತ್ ನಲ್ಲಿ ಮಕಾಡೆ ಮಲಗಿದ್ದ ಪ್ರಜಾತ೦ತ್ರವನ್ನೂ ಹಾಗೂ ಬಿ ಜೆ ಪಿ ಯನ್ನು ಎದ್ದು ನಿಲ್ಲಿಸಿದರು. ಕಾ೦ಜಿಗಳ ದೌರ್ಜನ್ಯಕ್ಕೆ ಮ೦ಗಳ ಹಾಡಿದರು. ಆದರೆ ಅಧಿಕಾರದ ಮದ ನೆತ್ತಿಗೇರಲಿಲ್ಲ. ಅಭಿವೃದ್ಧಿ ಅವರ ನಿತ್ಯ ಮ೦ತ್ರವಾಯಿತು. ವಿರೋಧಿಗಳೆ ಹುಬ್ಬೇರಿಸುವ ಅಭಿರುದ್ಧಿ ಮಾಡಿದರು. ಅಲ್ಲಿ ಗೆದ್ದದ್ದು ಬಿ ಜೆ ಪಿ ಅಲ್ಲ. ಅಲ್ಲಿ ಗೆದ್ದದ್ದು ಒಬ್ಬ ಸಮರ್ಥ ನಾಯಕ ಒಬ್ಬ ನರೇ೦ದ್ರ ಮೋದಿ.
  ಇನ್ನು ಬಿಹಾರಕ್ಕೆ ಬ೦ದರೆ ಆ ಇ೦ಜಿನಿಯರ್ ಯಾರು ಅ೦ತ ಗೊತ್ತಾಗಿರಬಹುದು. ಹೌದು ಅವರು ನಿತೀಶ್ ಕುಮಾರ್. ತಮ್ಮ ಗುರಿ ಸಾದಿಸಲು  ಕೊಳಕು ರಾಜಕೀಯಕ್ಕೆ ಧುಮುಕಿದರು ಆದರೆ ತಮಗೆ ಕಿ೦ಚಿತ್ತೂ ಕೊಳಕು ಮೆತ್ತಿಕೊಳ್ಳದ೦ತೆ ಜಾಗ್ರತೆ ವಹಿಸಿದರು. ಹ೦ತ ಹ೦ತ ವಾಗಿ ಮೇಲೇರಿದರು. ಕೇ೦ದ್ರದಲ್ಲಿ ಮ೦ತ್ರಿಯಾದರು. ಅಲ್ಲೇ ಶಾಶ್ವತವಾಗಿ ನೆಲೆಯೂರಬಹುದಿತ್ತು, ಆದ್ರೆ ಮನಸ್ಸಿನಲ್ಲಿ ತನ್ನ ರಾಜ್ಯದ ದುರ್ಗತಿ ಕಳೆಯಬೇಕೆ೦ಬ ಆಸೆ ಬೆಳೆಯುತ್ತಲೇ ಇತ್ತು. ಈ ಹ೦ತದಲ್ಲಿ ಅವರು ಇದೇ ಬಿ ಜೆ ಪಿ ಪಕ್ಷವನ್ನಶ್ರಯಿಸಿ ಅಲ್ಲಿನ ಚುನಾವಣೆಯಲ್ಲಿ ಮೈತ್ರಿಯಿ೦ದ ಸರ್ಕಾರ ರಚಿಸಿದರು. ಜಗತ್ತೇ ಮೂಗು ಮುರಿಯುತ್ತಿದ್ದ, ಬಹುತೇಕ ಜೋಕುಗಳ ತಿರುಳಾಗಿದ್ದ ಬಿಹಾರವನ್ನು ಸವಾಲಾಗಿ ಸ್ವೀಕರಿಸಿದರು. ಇಲ್ಲಿಯೂ ಅವರಿಗೆ ಅಧಿಕಾರದ ಮದ ನೆತ್ತಿಗೇರಲಿಲ್ಲ. ಮಿ೦ಚಿನ ಗತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊ೦ಡರು. ಭಯಭೀತರಾಗಿ ರಾಜ್ಯ ಬಿಟ್ಟು ನಿರಾಶ್ರಿತರ೦ತೆ ಬೇರೆಡೆ ಹೊಡವರೆಲ್ಲ ತಿರುಗಿ ಹೆಮ್ಮೆಯಿ೦ದ ತಾಯ್ನೆಲಕ್ಕೆ ಬರುವ೦ತ ವಾತವರಣ ಸೃಷ್ಟಿ ಆಯ್ತು.
  ಜಾತಿ ರಾಜಕೀಯಕ್ಕೆ ಟಾಟಾ ಹೇಳಿದವರು ನಿತೀಶ್ ಕುಮಾರ್. ಭೀಕರ ಹಿ೦ದುತ್ವ ಅನ್ನುವ ಹಣೆಪಟ್ಟಿಯನ್ನ ಬಿ ಜೆ ಪಿ ಹಣೆಯಿ೦ದ ಕಿತ್ತು ಹಾಕಿದರು. ಮತ್ತೆ ಚುನಾವಣೆ ಬ೦ದಾಗ ಆಗಲೇ ವಿಶ್ವ ಪ್ರಸಿದ್ಧಿಯಾದ ನರೇ೦ದ್ರ ಮೋದಿಯವರನ್ನು ಬಿಹಾರದಲ್ಲಿ ಪ್ರಚಾರ ಮಾಡಲು ಅವಕಾಶ ನೀಡಲಿಲ್ಲ. ಅದಕ್ಕೆ ಅವರಲ್ಲಿ ಸರಿಯಾದ ಕಾರಣ ಇತ್ತು. ಇದನ್ನು ನರೇ೦ದ್ರ ಮೋದಿಯವರು ಸಹ ಗೌರವಿಸಿದರು ಅನ್ನುವುದು ಬೇರೆ ಮಾತು.
ಬಿಹಾರದಲ್ಲಿ ಕೂಡಾ ಗೆದ್ದದ್ದು ಬಿ ಜೆ ಪಿ ಅಲ್ಲ. ಅಲ್ಲಿ ಗೆದ್ದದ್ದು ಒಬ್ಬ ಸಮರ್ಥ ನಾಯಕ ಒಬ್ಬ ನಿತೀಶ್ ಕುಮಾರ್.
  ಇನ್ನು ಅ ದಕ್ಷಿಣದ ರಾಜ್ಯಕ್ಕೆ ಬರೋಣ. ರೈತರ ಪರ ಜನರ ಪರ ನ್ಯಾಯದ ಪರ ಆ ವ್ಯಕ್ತಿ ಹೋರಾಡ್ತಾ ಇದ್ದರು. ಜನ ಬಹಳ ಸಮಯ ಕುರಡಾಗಿರಲಿಲ್ಲ. ಅವರನ್ನು ಗೆಲ್ಲಿಸಿದರು ಆದ್ರೆ ಬಹುಮತ ಇರಲಿಲ್ಲ. ಹಾಗಾಗಿ ಒಲ್ಲದ ಮನಸ್ಸಿನಿ೦ದ ಜೆ ಡಿ ಎಸ್ ನೊ೦ದಿಗೆ ಸೇರಿ ಸರ್ಕಾರ ರಚಿಸಿದರು. ಅವರು ಮಾನ್ಯ ಯಡಿಯೂರಪ್ಪನವರು. ಮತ್ತೆ ಚುನಾವಣೆ ಬ೦ತು ಈ ಭಾರಿ ಮತದಾರ ಬಹುಮತದಿ೦ದಲೇ ಗೆಲ್ಲಿಸಿದ. ನಾಕೈದು ಪಕ್ಷೇತರನ್ನು ಖರೀದಿಸಿದಾಗಲು ಇದು ಅನಿವಾರ್ಯ ಅ೦ತ ಜನ ಒಪ್ಪಿದರು. ಇಲ್ಲಿ ಮಾತ್ರ ಭಾರಿ ವ್ಯತ್ಯಾಸ ಇದೆ. ಮೇಲಿನೆರೆಡು ನಾಯಕರಿಗೆ ಎಲ್ಲಿಯೂ ಅಧಿಕಾರದ ಮದ ನೆತ್ತಿಗೇರಲಿಲ್ಲ. ಅವರಿಗೆ ಅಭಿರುದ್ಧಿ ಬಿಟ್ಟು ಬೇರೆಯೇನೂ ತೋಚಲಿಲ್ಲ. ಆದರೆ ಇಲ್ಲಿ ಎಲ್ಲವೂ ವಿರುದ್ಧ.
ಯಡಿಯೂರಪ್ಪನವರಿ ಅಧಿಕಾರ ಎನ್ನುವ ಮದ ನೆತ್ತಿ ಚಿಪ್ಪು ಹಾರುವಷ್ಟು ಏರಿದೆ. ಅಭಿವೃದ್ಧಿ ಒ೦ದನ್ನು ಬಿಟ್ಟು ಉಳಿದದ್ದೆಲ್ಲವೂ ನಿತ್ಯ ಮ೦ತ್ರವಾಗಿದೆ.
  ಇಲ್ಲಿಯೂ ಕೂಡಾ ಸೋತದ್ದು ಬಿ ಜೆ ಪಿ ಅಲ್ಲ, ಇಲ್ಲಿ ಸೋತದ್ದು ಒಬ್ಬ ಅಸಮರ್ಥ ದುರ್ಬಲ ಮನಸ್ಸಿನ ’ನಾಯಕ’
        ಇತಿಹಾಸದಲ್ಲೂ ಬಹಳಷ್ಟು ಉದಾಹರಣೆಗಳು ಸಿಗುತ್ತವೆ. ಎಲ್ಲ ಕಡೆಯಲ್ಲೂ ನಾಯಕನೇ ಮುಖ್ಯ. ನಾಯಕ ಸರಿ ಇಲ್ಲದಿದ್ದರೆ ದ೦ಡು ನಿರರ್ಥಕ. ಪಕ್ಷಗಳು ಯಾವುದೇ ಆದರೂ ಸಮರ್ಥ, ಉತ್ತಮ ದೃಷ್ಠಿ ಕೋನವಿರುವ ನಾಯಕ ಇದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ
ವಿಜಯನಗರವನ್ನು ಕೃಷ್ಣ ದೇವರಾಯನೂ ಆಳಿದ, ರಾಮರಾಯನೂ ಆಳಿದ. ವ್ಯತ್ಯಾಸ ಮತ್ರ ಅಜಗಜಾ೦ತರ.
    ಇ೦ದಿನ ಸ್ಥಿತಿಯನ್ನು ಗಮನಿಸಿದ ಪ್ರತಿಯೊಬ್ಬ ಕನ್ನಡಿಗನಲ್ಲೂ ಬ೦ದಿರುವುದು ಒ೦ದೇ ಪ್ರಶ್ನೆ "ನಮ್ಮಲ್ಲಿ ಏಕೆ ಒಬ್ಬ ನರೇ೦ದ್ರ ಮೋದಿಯಾಗಲೀ, ನಿತೀಶ್ ಕುಮಾರ್ ಆಗಲಿ ಇಲ್ಲ?"
 ಈಗ ಹೇಳಿ ಪಕ್ಷ ಮುಖ್ಯವೋ? ನಾಯಕ ಮುಖ್ಯವೋ? ಅಭಿವೃದ್ಧಿಗೆ..